Read in English.
೧೯೯೨ ರಲ್ಲಿ ಮೈಸೂರು ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ಸಕ್ರಿಯವಾಗಿತ್ತು. ನಾನು ಕಾಲೇಜಿನಿಂದ ನಿಯೋಜನೆಯ ಮೇರೆಗೆ ಆರು ತಿಂಗಳು ಮೈಸೂರು ಜಿಲ್ಲಾ ಸಂಯೋಜಕಿಯಾಗಿ - ಮಹಿಳಾ ಸಾಕ್ಷರತೆಗೆ ಪೂರ್ಣ ಪ್ರಮಾಣದ ಕಾರ್ಯಕರ್ತಳಾಗಿ ಕೆಲಸ ಮಾಡಿದೆ.
ಮೊದಲ ಹಂತದ ಕಾರ್ಯಕ್ರಮದಲ್ಲಿ - ಶಾಲಾ ಅಧ್ಯಾಪಕರು ವಯಸ್ಕರಿಗೆ ರಾತ್ರಿ ಶಾಲೆಯಲ್ಲಿ ಪಾಠ ಮಾಡಲು ತರಬೇತಿ, ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರಿಗೆ ಸಾಕ್ಷರತೆಯ ಮಹತ್ವವನ್ನು ತಿಳಿಸುವುದು, ಮಹಿಳೆಯರ ಸಭೆ ಸೇರಿಸಿ, ಕಾನೂನು, ಆರೋಗ್ಯದ ಬಗೆಗೆ ಅರಿವು ಮೂಡಿಸುವುದು, ಮಕ್ಕಳನ್ನು ಜೀತಕ್ಕಿರಿಸದೆ ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸುವುದು, ರಾತ್ರಿ ಶಾಲೆಗೆ ಬರುವಂತೆ ವಯಸ್ಕರ ಮನವೊಲಿಸುವುದು, ನವ ಸಾಕ್ಷರರಿಗೆ ಪುಸ್ತಕ ರಚಿಸುವುದು - ಇವಿಷ್ಟು ನಮ್ಮ ಕಾರ್ಯಕ್ರಮದ ರೂಪರೇಖೆಯಾಗಿತ್ತು. ಭಾಷಣ, ಹಾಡು, ಸಣ್ಣನಾಟಕಗಳನ್ನು ಈ ಸಂದರ್ಭದಲ್ಲಿ ಬಳಸಿಕೊಳ್ಳುತ್ತಿದೆವು.
ನಮ್ಮ ಕಾರ್ಯಕ್ರಮಗಳಲ್ಲಿ, ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸಾಕ್ಷರತಾ ಕಾರ್ಯಕರ್ತರಿರುತ್ತಿದ್ದರು. ಸಭೆಗಳಲ್ಲಿ ಪಾನ ನಿರೋಧದ ಬಗೆಗೂ ಸಾಕಷ್ಟು ಪ್ರಚೋದನಾತ್ಮಕ ಭಾಷಣ ಮಾಡುತ್ತಿದ್ದೆವು.
ಒಂದು ದಿನ ಹೆಗ್ಗಡದೇವನಕೋಟೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಹಿಳೆಯರು ಸಂಘಟಿತರಾಗಿ ಹೆಂಡದ ಗಾಡಿಯನ್ನು ತಡೆದಿದ್ದಾರೆ. ರಸ್ತೆಯಲ್ಲಿ ಕುಳಿತು ಮದ್ಯದ ಗಾಡಿ ಮುಂದೆ ಹೋಗದಂತೆ ಅಡ್ಡಗಟ್ಟಿದ್ದಾರೆ.
ಮಹಿಳೆಯೊಬ್ಬಳು ಗ್ರಾಮ ಪಂಚಾಯತಿ ಆಫೀಸ್-ಗೆ ನುಗ್ಗಿ ಜಿಲ್ಲಾಧಿಕಾರಿಗಳಿಗೆ ದೂರವಾಣಿಯಲ್ಲಿ ಮಾತನಾಡಬೇಕೆಂದು ಮೊರೆಯಿಟ್ಟಿದ್ದಾಳೆ. ಕಚೇರಿ ಸಿಬ್ಬಂದಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಆತಂಕದಿಂದ ಬೆವರಿ ತೊಪ್ಪೆಯಾಗಿದ್ದ ಆ ಕೂಲಿಕಾರ ಮಹಿಳೆ ನಡುಗುವ ದನಿಯಲ್ಲಿ ಪಾನನಿರೋಧದ ತಮ್ಮ ಚಳವಳಿಗೆ ಬೆಂಬಲ ಸೂಚಿಸಬೇಕೆಂದು ಪ್ರಾರ್ಥಿಸಿದ್ದಾಳೆ. ಇಬ್ಬರು ಕೂಲಿಕಾರ ಮಹಿಳೆಯರ ದಿಟ್ಟತನ ಕಾಳ್ಗಿಚ್ಚಿನಂತೆ ಕ್ಷಣಾರ್ಧದಲ್ಲಿ ಊರ ತುಂಬ ಹರಡಿತ್ತು. ಗ್ರಾಮದ ಪ್ರಮುಖ ಗಂಡಸರು ಅಲ್ಲಲ್ಲಿ ಗುಂಪುಗೂಡಿ ತಮ್ಮೂರ ಹೆಂಗಸರ ಈ ಹೊಸನಡವಳಿಕೆಯ ಬಗೆಗೆ ಚರ್ಚಿಸತೊಡಗಿದರು. ಕತ್ತಲಾಗುತ್ತಿ ದ್ದಂತೆ ಕೆಲವರು ಹೋಗಿ ಹಿಂದಿರುಗಿದ್ದ ಹೆಂಡದ ಲಾರಿಯಿಂದ ಒಂದಷ್ಟು ಪಾಕೀಟುಗಳನ್ನು ತಂದು ಮಹಿಳೆಯರಿಂದಲೇ ಮಾರಾಟ ಮಾಡಿಸಿದರು. ಅಷ್ಟು ಮಾತ್ರವಲ್ಲ, ಧೈರ್ಯವಾಗಿ ವ್ಯವಹರಿಸಿದ್ದ ಮಹಿಳೆಯರ ಗಂಡಂದಿರನ್ನು ಪತ್ತೆಹಚ್ಚಿ ಕರೆತಂದು ಅವರು ತೃಪ್ತಿಯಾಗುದಷ್ಟು ಕುಡಿಸಿದರು. ಹೆಣ್ಣುಮಕ್ಕಳು ಹದ್ದುಬಸ್ತಿತ್ತಿನಲ್ಲಿರಬೇಕು ಹೀಗೆ ಬೀದಿಗೆ ಬಂದರೆ ಮನೆ ಮರ್ಯಾದೆಯ ಕತೆಯೇನು? ಮನೆಗೆ ಹೋಗಿ, ಹೆಂಡತಿಯನ್ನು ಸರಿಯಾಗಿ ವಿಚಾರಿಸಿಕೊಳ್ಳಲು ಸಲಹೆ ನೀಡಿ ಕಳುಹಿಸಿದರು. ಪುಕ್ಕಟ್ಟೆಯಾಗಿ ನಶೆಯೇರಿಸಕೊಂಡಿದ್ದ 'ಪುರುಷಸಿಂಹ'ಗಳು ತೂರಾಡುತ್ತಾ ಮನೆ ತಲಪಿದ್ದುವು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಹೆಂಗಸು ಆ ದಿನ ಕೂಲಿಗೆ ಹೋಗಲಾರದ್ದರಿಂದ ಯಾರನ್ನೋ ಗೋಗರೆದು ಒಂದು ಸೇರು ರಾಗಿ ಸಾಲ ತಂದು ಅದನ್ನು ಬೀಸಿ, ಬಾವಿಯಿಂದ ನೀರು ತರಲು ಹೋಗಿದ್ದಳು. ಕುಡಿದು ತೂರಾಡುತ್ತ ಬಂದ ಅವಳ ಗಂಡ ಕೈಗೆ ಸಿಕ್ಕಿದ ರಾಗಿ ಹಿಟ್ಟಿಗೆ ಅಲ್ಲಿ ಇದ್ದ ಸೀಮೆಯೆಣ್ಣೆಯನ್ನು ಬೆರಸಿ ಕಲಸುತ್ತಾ ಕಳಿತಿದ್ದಾನೆ. ಅವನಿಗೆ ನಾನು ಏನು ಮಾಡುತ್ತಿದ್ದೇನೆಂಬ ಪರಿವೆಯೇ ಇರಲಿಲ್ಲ.
ನೀರನ್ನು ಹೊತ್ತು ತಂದ ಮಹಿಳೆ ಗುಡಿಸಿನ ಒಳಗೆ ಕಾಲಿಡುತ್ತಿದಂತೆ ಗಂಡ ಮಾಡುತ್ತಿದ್ದ ಕೆಲಸ ನೋಡಿ ಸಿಟ್ಟಿನಿಂದ ಚೀರಾಡಿದ್ದಾಳೆ. ಅದನ್ನೇ ಕಾಯುತ್ತಿದ್ದಂತೆ ಆತ, “ಗಾಡಿ ತಡೆಯಕ್ಕೆ ಹೋಗಿದ್ಯಾ, ನೋಡು ನಾನು ಕುಡಿದಿದ್ದೀನಿ, ದಿನಕ್ಕಿಂತ ಜಾಸ್ತಿ," ಎನುತ್ತ ಅವಳ ತಲೆ ಕೂದಲನ್ನು ಜಗ್ಗುತ್ತ, "ನೀನು ಲೀಡರು, ಮಹಾಲೀಡರು, ಮನೆ ಬಾಗಿಲಿಗೆ ಬಂದರೆ ನೀನು ಬಿಸಿ ನೀರು ಕೊಡಲಿಲ್ಲ. ಈಗ ಹೋಗಿದ್ದೀಯಾ ನೀರು ತರಲು ' , ಎಂದು ಹೊಡೆಯುತ್ತಲೇ ಇದ್ದನಂತೆ. ಕೂಗಾಟ ಕಿರುಚಾಟ ಕೇಳಿ, ಅಕ್ಕ ಪಕ್ಕದ ಮನೆಯವರು ಬಂದು ಅವರನ್ನು ಬಿಡಿಸಿಕೊಳ್ಳುತ್ತಾರೆ.
ಇನ್ನೂ ಕುಡಿತಕ್ಕೆ ಬಲಿಯಾಗದೆ ಇದ್ದ ಒಂದಿಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ ವಿಷಯ ತಿಳಿದು, ಸದರಿ ಗಂಡಸಿಗೆ ಹಿಗ್ಗಾಮುಗ್ಗಾ ಕುಡಿಸಿದವರನ್ನು ಪತ್ತೆಮಾಡಿ ಪೋಲಿಸ್ ಸ್ಟೇಷನ್ನಿನಲ್ಲಿ ದೂರು ದಾಖಲಿಸಲು ಹೋದರೆ ಅವರು ನಿರಾಕರಿಸುತ್ತಾರೆ. ಆಗ ಆ ತರುಣರು ಮೈಸೂರಿನ ಸಾಕ್ಷರತಾ ಕಾರ್ಯಕರ್ತರನ್ನು ಸಂಪರ್ಕಿಸಿದ್ದಿರು.
ನಾವೆಲ್ಲ ಸೇರಿ ಮೈಸೂರನ್ನು ಬಿಡುವಷ್ಟರಲ್ಲಿ ರಾತ್ರಿ ೮ ಗಂಟೆಯಾಗಿತ್ತು. ಹಳ್ಳಿಗೆ ತಲುಪಿ ಕೂಲಿಕಾರ ಮಹಿಳೆಯ ಗುಡಿಸಲೊಳಗೆ ಕಾಲಿಟ್ಟಾಗ ರಾತ್ರಿ ೧೦ ಗಂಟೆ. ಸಣ್ಣ ಗುಡಿಸಲು. ಒಂದೇ ಕೊಠಡಿ. ಒಂದು ಮೋಟುಗೋಡೆ ಅಡುಗೆ ಮನೆಯನ್ನು ನಡುಮನೆಯಿಂದ ಬೇರ್ಪಡಿಸಿತ್ತು.
ಮೈಸೂರಿನಿಂದ ಹೋದ ಸಾಕ್ಷರತಾ ಕಾರ್ಯಕರ್ತರೆಲ್ಲರೂ ಆ ಮನೆಯೊಳಗೆ ಕುಳಿತುಕೊಳ್ಳಲು ಜಾಗವಿರಲಿಲ್ಲ. ಸೀಮೆಯೆಣ್ಣೆಯ ವಾಸನೆ ಉಸಿರು ಗಟ್ಟಿಸುತ್ತಿತ್ತು. ನಾನು, ಉಮಾ ಮಹಾದೇವನ್ ಮಾತ್ರ ಆ ಮನೆಯೊಳಗೆ ಹೋದೆವು. ಉಮಾ ಆ ವರ್ಷ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಎರಡನೆಯ ರೈಂಕ್ ಪಡೆದು ಮೈಸೂರು ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿದ್ದರು. ಸಾಕ್ಷರತಾ ಆಂದೋಲನದಲ್ಲಿ ಕ್ರಿಯಾಶೀಲರಾಗಿದ್ದರು.
ನಾನು, ಉಮಾ ಮಹಾದೇವನ್ ಮಾತ್ರ ಆ ಮನೆಯೊಳಗೆ ಕುಳಿತಿದ್ದೆವು. ಆ ವೇಳೆಗೆ ಅವನಿಗೆ ಕುಡಿತದ ಅಮಲು ಇಳಿದಿತ್ತು. ತಲೆ ತಗ್ಗಿಸಿ ಕುಳಿತಿದ್ದ. ನಮ್ಮ ಸಹಾನುಭೂತಿಯ ಮಾತು ಕೇಳುತ್ತಿದ್ದಂತೆ ಮಹಿಳೆಯ ಸಂಕಟ ಹೆಚ್ಚಾಯಿತು. ಗಟ್ಟಿದನಿಯಲ್ಲಿ ಗಂಡನನ್ನೂ ಜಗತ್ತಿನ ಎಲ್ಲಾ ಗಂಡಸರನನ್ನೂ ಹೆಂಡದ ದೊರೆಗಳನ್ನೂ, ಮತ್ತು ಸರ್ಕಾರವನ್ನೂ ಬಯ್ಯುತ್ತ ತನ್ನ ಹೆಣ್ಣುಜನ್ಮಕ್ಕೆ ಧಿಕ್ಕಾರ ಕೂಗುತ್ತಿದ್ದಳು. ಮನೆ ಮುಂದೆ ನಮ್ಮ ವಾಹನ ನಿಂತಿದ್ದನ್ನು ಕಂಡು ಮತ್ತಷ್ಟು ಮಹಿಳೆಯರು ಬಂದು ಸೇರಿದರು.
ಮಹಿಳೆಯರಲ್ಲಿ ಒಗಟ್ಟಾಗಿ “ಹೆಂಡ ಊರನ್ನು ಪ್ರವೇಶಿಸಿದಂತೆ ತಡೆಯಿರಿ,” ಎಂದು ಭಾಷಣ ಮಾಡಿದ್ದ ನನ್ನನ್ನೇ ಕೆಕ್ಕರಿಸಿ ನೋಡುತ್ತ, "ನೋಡಿ ಮ್ಯಾಡಂಮ್ರವರೆ, ನಿಮ್ಮ ಮಾತು ಕೇಳಿ, ನಮ್ಮ ಪಾಡು, ಊರ ತುಂಬ ಎಲ್ಲರ ಮನೇಲೂ ಹೆಂಡದ ಹೊಳೆ ಹರಿದಿದೆ, ಗಾಡಿ ಬಂದಿಲ್ಲ. ಹೆಂಡ ಹೇಗೆ ಬಂತು ಕೇಳಿ? ನೀವೇನೋ ಭಾಷಣ ಮಾಡಿ ಸಿಟಿ ಸೇರ್ಕೊಂತಿರಾ. ನಮ್ಮ ಪಾಡು ನೋಡಿ ಅಂತ ಒಂದೇ ಸಮನೆ ಕೂಗಾಡಲು ಪ್ರಾರಂಭಿಸಿದರು. ಕೊನೆಗೆ ಯಾರು ಏನು ಮಾತಾಡ್ತಾ ಇದ್ದಾರೆ ಅನ್ನೋದೇ ತಿಳಿತಾ ಇರ್ಲಿಲ್ಲ. ಆಗಲೇ ರಾತ್ರಿ ಹನ್ನೊಂದಾಗಿತ್ತು. ಕುಳಿತಿದ್ದ ಉಮಾ ಅವರು ಎದ್ದು ನಿಂತು ಸಮಾಧಾನ ಮಾಡಲು ಪ್ರಯತ್ನಸಿದರು. ಇಂಥ ಸನ್ನಿವೇಶವನ್ನು ಬದುಕಿನಲ್ಲಿ ಮೊದಲ ಬಾರಿಗೆ ನಾವಿಬ್ಬರು ಕಂಡಿದ್ದೆವು. ನನ್ನದು ಹುಚ್ಚು ಆದರ್ಶ. ಉಮಾ ಅಧಿಕಾರಿಯಾಗಿ ತರಬೇತು ಪಡೆದಿದ್ದವರು. ಜನರನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು. ಆಗ ನಾನು ದೊಡ್ಡ ಗಂಟಲಲ್ಲಿ, "ಈ ಮೇಡಾಮ್ ಅವರು ಜಿಲ್ಲಾಧಿಕಾರಿ, ಸಹಾಯ ಮಾಡ್ತಾರೆ", ಎಂದು ವಿವರಿಸಲು ಹೆಣಗಿದೆ.
ಜನರಿಗೆ ಸ್ವಲ್ಪ ನಂಬಿಕೆ ಬಂತು. ನಾವು ಈಗಲೇ ಪೊಲೀಸ್ ಕಂಪ್ಲೇಂಟ್ ಕೊಡ್ತೀವಿ. ಹೆಂಡ ನಾಳೆಯೂ ಬರದಂಥೆ ವ್ಯವಸ್ಥೆ ಮಾಡ್ತೀವಿ, ಜಿಲ್ಲಾಧಿಕಾರಿಯವರೊಂದಿಗೆ ಮಾತಾಡ್ತೀವಿ, ಹೆದರಿಕೊಳ್ಳಬೇಡಿ. ನಾವೆಲ್ಲ ನಿಮ್ಮ ಬೆಂಬಲಕ್ಕಿದ್ದೇವೆ. ಅಂತ ಉಮಾ ಸಮಾಧಾನ ಮಾಡಿದರು.
ಎಚ್. ಡಿ. ಕೋಟೆಗೆ ಬಂದು, ಪೊಲೀಸ್ ಕಂಪ್ಲೇಂಟ್ ಕೊಟ್ಟು, ಮನೆಗೆ ಬಂದ್ವಿ. ದಾರಿಯುದ್ದಕ್ಕೂ ಒಂದೂ ಮಾತನಾಡುವ ಸ್ಥಿತಿಯಲ್ಲಿ ನಾನು, ಉಮಾ ಇರಲಿಲ್ಲ. ಉಮಾ ಅವರು ಉನ್ನತ ಅಧಿಕಾರಿಯಾಗಿ, ಅದರಲ್ಲೂ ಮಹಿಳೆಯರ ಬದುಕನ್ನು ಸುಧಾರಿಸುವ ಕನಸು ಹೊತ್ತು, ಕ್ರಿಯಾಶೀಲರಾಗಲು ಪ್ರಯತ್ನಿಸುತ್ತಿದ್ದರು. ನಾನು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ ಆದರ್ಶವನ್ನು ತಲೆಯಲ್ಲಿ ತುಂಬಿಕೊಂಡಿದ್ದೆ.
ಸಾಕ್ಷರತಾ ಆಂದೋಲನದ ಕಾರ್ಯಕರ್ತೆಯಾಗಿ ಪಾನನಿರೋಧದ ಬಗೆಗೆ ಜಾಗೃತಿ ಮೂಡಿಸುವ ನನ್ನ ಕನಸು ಮೊದಲ ಯತ್ನಕ್ಕೆ ಕಮರಿದಂತಾಯ್ತು. " ಯಾರಿಂದಲೂ ಹೆಂಡ ಕುಡಿಯೋದನ್ನ ತಪ್ಪಿಸೋಕೆ ಆಗೋದಿಲ್ಲ. ನಮ್ಮ ತಾತನ ಕಾಲದಿಂದ ನೋಡ್ತಾ ಇದ್ದೀವಿ. ಹೆಂಡದ ಅಂಗಡಿ ಊರಾಚೆ ದೂರ ಇರೋ ಹಂಗಾದ್ರೂ ಮಾಡಿ ಮ್ಯಾಡಮ್ಮೊರೆ. ಕುಡಿದು ಮನೆ ಸೇರೋ ಹೊತ್ಗೆ ಸ್ವಲ್ಪನಾದ್ರೂ ನಶೆ ಇಳಿದಿರುತ್ತೆ. ಹೊಡೆತ ಕಡಿಮೆ ಆಗುತ್ತೆ. ನಮ್ಮ ಹೆಣ್ಣು ಜನ್ಮಕ್ಕೆ ದುಡಿದು ಸಂಸಾರ ಸಾಗಿಸೋದು ಇದ್ದದ್ದೇ. ಇಂಥದ್ರಲ್ಲಿ ಮಕ್ಕಳನ್ನು ಸ್ಕೂಲಿಗೆ ಕಳಿಸೋದಾ, ನಾವು ಅಕ್ಷರ ಕಲಿಯೊದಾ ಯಾಕ್ಬೇಕು, ಹೇಳಿ? ಅಂತ ಗುಂಪಿನಲ್ಲಿದ್ದ ಹೆಂಗಸರು ಒಬ್ಬರ ನಂತರ ಮತ್ತೊಬ್ಬರು ಕೈ-ಬಾಯಿ ತಿರುವಾಡುತ್ತ ದು:ಖವನ್ನೆಲ್ಲ ತಮ್ಮ ದನಿಯಲ್ಲಿ ತುಂಬಿಕೊಂಡು ಮಾತಾಡುತ್ತಿದ್ದರು. ಈ ದೃಶ್ಯ ಮತ್ತೆ ಮತ್ತೆ ಕಣ್ಣಿಗೆ ಕಟ್ಟುತ್ತಲೇ ಇತ್ತು.
ಮನೆ ತಲುಪಿದಾಗ ರಾತ್ರಿ ಒಂದು ಗಂಟೆ. ಮನೆ ಬಾಗಿಲನ್ನು ತೆರೆದಿಟ್ಟು, ಊಟವನ್ನು ಮಾಡದೇ ಮನೆ ಬಾಗಿಲಲ್ಲೆ ಕುಳಿತಿದ್ದ ನನ್ನ ಗಂಡ ಒಂದೂ ಮಾತನಾಡದೆ ಸಿಟ್ಟನ್ನು ನುಂಗಿಕೊಂಡು ನಡುರಾತ್ರಿಯಲ್ಲಿ ಮನೆಗೆ ಬಂದ ಸಮಾಜ ಸೇವಕಿಯಾಗಲು ಬಯಸುತ್ತಿದ್ದ ಮಡದಿಯನ್ನು ಸೌಮ್ಯವಾಗಿ ಪ್ರತಿಭಟಿಸಿ ಮನೆ ಸೇರಿಸಿದ್ದರು.
ಮಾರನೆ ದಿನ ಜಿಲ್ಲಾಧಿಕಾರಿಗಳ ಬಳಿ ನಿನ್ನೆಯ ಅನುಭವವನ್ನು ಚರ್ಚಿಸಿದೆವು. ಅವರು ಕೂಲಿಕಾರ ಹೆಂಗಸರ ಮಕ್ಕಳನ್ನು ಬೆಂಬಲಿಸಿ ಹೆಂಡದ ಕಂಟ್ರಾಕ್ಟರ್ ಬಳಿ ಮಾತನಾಡಿದರು. ಆ ಖದೀಮರು ವಿಧಾನಸೌಧವನ್ನೇ ಸಂಪರ್ಕಿಸಿ ತಮ್ಮ ವ್ಯವಹಾರವನ್ನು ಮುಂದುವರಿಸಿದರು.
ಅಬ್ಕಾರಿ ಬಾಬಿನಿಂದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ, ಎನ್ನುತ್ತದೆ ಸರ್ಕಾರ. ಅಭಿವೃದ್ಧಿಗೆ ಆರೋಗ್ಯಕ್ಕೆ ಸರ್ಕಾರ ಮಾಡುವ ವೆಚ್ಚ ಅಬ್ಕಾರಿ ಬಾಬಿನಿಂದ ಬರುವುದಕ್ಕಿಂತ ಹೆಚ್ಚು ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸುತ್ತವೆ.
ಅಬ್ಕಾರಿ ಹಣದಿಂದ ಅಭಿವೃದ್ಧಿ ಶಿಕ್ಷಣ ಕೊಡುವುದಾದರೆ ಅದ್ಯಾವುದೂ ಬೇಡ ಅದು ಪಾಪದ ಹಣ ಎನ್ನುತ್ತಿದ್ದ ಗಾಂಧೀಜಿ ಅವರ ಮಾತು ನೆನಪಾಗ್ತದೆ.
ಕುಡಿತ ಹೆಂಗಸರ ಮಕ್ಕಳ ಬದುಕನ್ನು ಹಾಳುಗೆಡವಿದೆ. ಎಷ್ಟೋ ಸಮಾಜ ಘಾತಕ ಕೆಲಸಗಳು, ಅತ್ಯಾಚಾರಗಳು ಕುಡಿತದ ಅಮಲಿನಲ್ಲಿಯೇ ನಡೆಯುತ್ತವೆ. ಬಡ ಹೆಣ್ಣುಮಕ್ಕಳ ಬದುಕಂತೂ ಈ ಕಾರಣಕ್ಕಾಗಿಯೇ ಚಿಂತಾಜನಕವಾಗಿದೆ. ಇದನ್ನೆಲ್ಲ ತಪ್ಪಿಸುವ ಇಚ್ಚಾಶಕ್ತಿಯ ರಾಜಕೀಯ ನಾಯಕರಿಗಾಗಿ, ಸಾಮಾಜಿಕ ಬದಲಾವಣೆಗಾಗಿ ಮಹಿಳಾ ಲೋಕ ಕಾಯುತ್ತಲೇ ಇದೆ.
ಎಚ್. ಜೆ. ಸರಸ್ವತಿ ಅವರು ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಜೆ.ಎಸ್.ಎಸ್. ವಿದ್ಯಾಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತರಾಗಿದ್ದಾರೆ.
೨೩ ಜೂನ್ ೨೦೨೧