Read in English.
ಮುಂಜಾನೆಯ ತಂಪು ಗಾಳಿಗೆ ಕೆಂಪು ಕಣಿಗಿಲೆಗಳ ಗೊಂಚಲುಗಳು ತೂಗಾಡುತ್ತಿದ್ದವು. ಊಸರವಳ್ಳಿಯಂತೆ ಘಳಿಗೆ ಘಳಿಗೆಗೂ ಬಣ್ಣ ಬದಲಾಯಿಸುತ್ತಿರುವ ಆಗಸವನ್ನೇ ದಿಟ್ಟಿಸುತ್ತಾ ಆ ಕಣಿಗಿಲೆ ಪೊದೆಯ ಪಕ್ಕ ನಾನು ಕುಳಿತಿದ್ದೆ. ಉತ್ತರ ಪ್ರದೇಶ ರಾಜ್ಯದೊಳಗಿನ ಒಂದು ಚಿಕ್ಕ ಹಳ್ಳಿ, ಬೈರಾಚ್‍ನಲ್ಲಿ ಇದೀಗ ಚಳಿಗಾಲದ ಆರಂಭ. ದಿನದ ಕೆಲಸಗಳು ಪ್ರಾರಂಭವಾಗಲು ಇನ್ನೂ ಸ್ವಲ್ಪ ಹೊತ್ತಿತ್ತು. ನಾನು ಒಂಟಿಯಾಗಿ ಚಹಾ ಹೀರುತ್ತಾ ಕುಳಿತಿದ್ದೆ.ಇನ್ನೇನು ನನ್ನ ಸಹವರ್ತಿಗಳು ಏಳುವವರಿದ್ದರು. ನಾವೆಲ್ಲಾ ಈ ಬೆಳಗ್ಗೆ ಒಂದು ಸ್ತ್ರೀ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಕೆಲವು ಮಹಿಳಾ ಸಮುದಾಯಗಳಿಗೆ ನಮ್ಮ ಡಾಕ್ಯುಮೆಂಟರೀ ಚಿತ್ರಪಟವನ್ನು ತೋರಿಸಬೇಕಿತ್ತು.
ಕೆಂಪು ಕಣಿಗಿಲೆಗಳು ನನ್ನನ್ನು ಮೂವತ್ತೈದು ವರ್ಷಗಳ ಹಿಂದಕ್ಕೆ ಕರೆದೊಯ್ದವು. ಆಗ ನಾನು ಯೆಮನ್ ದೇಶದ ದಕ್ಷಿಣದಲ್ಲಿರುವ ಏಡನ್ ನಗರದ ಹತ್ತಿರದ ಒಂದು ದ್ವೀಪವಾದ ಲಿಟಲ್-ಏಡನ್ನಿನಲ್ಲಿದ್ದೆ. ಕೆಂಪು ಸಾಗರದ ದಡದಲ್ಲಿದ್ದ ಅದು ನನ್ನ ವೈವಾಹಿಕ ಬದುಕಿನ ಮೊಟ್ಟಮೊದಲನೆಯ ಮನೆಯಾಗಿತ್ತು. ಆ ಮನೆಯ ಮುಂದಿನ ದೊಡ್ಡ ಕೈತೋಟದ ಅಂಚಿಗಿದ್ದ ಮೋಟು ಗೋಡೆಗೆ ಹೊಂದಿಕೊಂಡಂತೆ ಕೆಂಪು ಕಣಿಗಿಲೆ ಮರದ ಪೊದೆಗಳಿದ್ದವು. ಅದರಲ್ಲಿ ಕೆಂಪು ಹೂಗಳ ಗೊಂಚಲುಗಳು ತೂಗಾಡುತ್ತಿದ್ದವು. ಆ ಕಡುಗೆಂಪು ಗೊಂಚಲುಗಳಡಿಯಲ್ಲಿ ಮೋಟು ಗೋಡೆಯ ಮೇಲೆ ಕುಳಿತು ನಾನು ಕೆಂಪುಸಾಗರದ ದಟ್ಟನೀಲಿ ತೆರೆಗಳನ್ನು ನೋಡುತ್ತಿರುತ್ತಿದ್ದೆ. ನನಗೆ ಆಗ ತಾನೇ ಮದುವೆಯಾಗಿತ್ತು. ಮೈಸೂರಿನಲ್ಲಿ ನಾನು ಜೆನೆಟಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದೆ ಅಲ್ಲದೆ ನಾನು ನನ್ನ ವಿಶ್ವವಿದ್ಯಾಲಯವನ್ನು ಬ್ಯಾಡ್‍ಮಿಂಟನ್ ಕ್ರೀಡೆಯಲ್ಲಿ ಪ್ರತಿನಿಧಿಸಿದ್ದೆ. ಮೈಸೂರಿನ ಬಿಡುವಿಲ್ಲದ ಜೀವನವನ್ನು ಬಿಟ್ಟು ನನ್ನ ಪತಿಯೊಂದಿಗೆ ಈ ಪುಟ್ಟ ದ್ವೀಪಕ್ಕೆ ವಾಸಿಸಲು ಬಂದಿದ್ದೆ. ನನಗೆ ಅರಾಬಿಕ್ ಬರುತ್ತಿರಲಿಲ್ಲವಾದುದರಿಂದ ಅಲ್ಲಿ ಉದ್ಯೋಗ ಸಿಗುವ ಸಾಧ್ಯತೆ ಬಹಳ ಕಡಿಮೆಯಿತ್ತು. ಅಲ್ಲದೆ ನಾನು ಶೀಘ್ರದಲ್ಲೇ ಗರ್ಭಿಣಿಯಾದೆ. ಆ ಕಾಲದಲ್ಲಿ ಬ್ರಾಹ್ಮಣ ಯುವತಿಯರು ಮದುವೆಯಾದ ನಂತರ ಸಂಪೂರ್ಣವಾಗಿ ಮನೆ ಮತ್ತು ಕುಟುಂಬಕ್ಕೆ ತಮ್ಮ ಸಮಯವನ್ನು ಮೀಸಲಿಡುವುದು ಸಾಮಾನ್ಯವಾಗಿತ್ತು.
ಇಪ್ಪತ್ತೈದು ವರ್ಷಗಳ ತರುವಾಯ ಕೊಲ್ಲಿ ಯುದ್ಧದ ಕಷ್ಟಕಾರ್ಪಣ್ಯಗಳನ್ನು ಸಹಿಸಿಕೊಂಡು ನಂತರ ಕ್ಯಾನ್ಸರ್ ಖಾಯಿಲೆಗೆ ನನ್ನ ಪತಿಯನ್ನು ಕಳೆದುಕೊಂಡು ಒಬ್ಬಂಟಿಯಾಗಿ ಮೈಸೂರಿಗೆ ಮರಳಿ ಬಂದು ಮತ್ತೆ ನನ್ನ ಹಳೆಯ ಮೈಸೂರು ವಿಶ್ವವಿದ್ಯಾಲಯವನ್ನು ಸೇರಿಕೊಂಡಿದ್ದೆ. ಆರು ವರ್ಷಗಳ ಕಾಲ ಫ಼್ರೆಂಚ್ ಭಾಷೆಯನ್ನು ಕಲಿತುಕೊಂಡು ಅದರ ಜೊತೆಗೆ ಭಾಷಾಂತರದಲ್ಲಿ ಪಿಜಿ. ಡಿಪ್ಲೊಮಾವನ್ನೂ ಪಡೆದುಕೊಂಡು ನನ್ನ ನಲವತ್ತೊಂಭತ್ತನೆಯ ವಯಸ್ಸಿನಲ್ಲಿ ಪ್ರಥಮ ಬಾರಿಗೆ ಉದ್ಯೋಗ ಪ್ರಾರಂಭ ಮಾಡಿದ್ದೆ.
ಸಂಶೋಧಕರುಗಳ ಜೊತೆಗೂ ಡಾಕ್ಯುಮೆಂಟರಿ ಚಿತ್ರಗಳನ್ನು ತೆಗೆಯುವವರ ಜೊತೆಗೂ ನಾನು ಭಾಷಾಂತರ ಮಾಡುವ ಕೆಲಸ ಮಾಡುತ್ತಿದ್ದೆ.
ನಾನು ಕೆಲಸ ಮಾಡಿದ ಒಂದು ಡಾಕ್ಯುಮೆಂಟರಿ ಚಿತ್ರದಲ್ಲಿ ಚಿತ್ರದ ನಿರ್ಮಾಪಕ/ನಿರ್ದೇಶಕರು ಚಿತ್ರದ ಕಥಾನಾಯಕಿಯೊಂದಿಗೆ ಹತ್ತು ವರ್ಷಗಳ ಕಾಲ ಒಡನಾಟ ನಡೆಸಿ ಚಿತ್ರ ತೆಗೆದರು. ಆ ಅವಧಿಯಲ್ಲಿ ನಾನು ಅವರಿಬ್ಬರ ನಡುವೆ ಒಬ್ಬರಿಗೆ ಇನ್ನೊಬ್ಬರ ಕಣ್ಣು, ಕಿವಿ, ನಾಲಗೆ ಮತ್ತು ಬುದ್ಧಿಯಾಗಿಬಿಟ್ಟಿದ್ದೆ. ಆ ಚಿತ್ರವು ಕರ್ನಾಟಕದ ಒಬ್ಬ ಹುಡುಗಿಯ ಕತೆಯಾಗಿತ್ತು. ಅವಳು ಬಾಲ್ಯವಿವಾಹವನ್ನು ಮಾಡಿಸಿಕೊಂಡು ಗಂಡನಿಂದ ಕ್ರೌರ್ಯಕ್ಕೆ ಒಳಗಾಗಿ, ತಡೆದುಕೊಳ್ಳಲಾರದೆ ಓಡಿ ಹೋಗಿ ನಂತರ ದಕ್ಷಿಣ ಭಾರತದ ಪ್ರಥಮ ಟ್ಯಾಕ್ಸಿ ಚಾಲಕಿಯಾಗುವ ಕತೆ. ಆ ಚಿತ್ರವನ್ನು ನಾವು ಪ್ರಪಂಚದ ವಿವಿಧ ದೇಶಗಳ ಚಿತ್ರೋತ್ಸವಗಳಿಗೆ ತೆಗೆದುಕೊಂಡು ಹೋದೆವು. ಅಲ್ಲೆಲ್ಲಾ ಚಿತ್ರಪ್ರದರ್ಶನದ ನಂತರ ಪ್ರಶ್ನೋತ್ತರದ ಸಮಯದಲ್ಲಿ ನಾನು ಆ ಕಥಾನಾಯಕಿಯ ಉತ್ತರಗಳನ್ನು ತರ್ಜುಮೆ ಮಾಡಬೇಕಿತ್ತು.
ನನ್ನ ಹಾಗೂ ಅವಳ ಸಾಮಾಜಿಕ ಸ್ಥಾನಮಾನ, ವರ್ಗ, ಸವಲತ್ತುಗಳಲ್ಲಿ ಅಜಗಜಾಂತರವಿತ್ತು. ಆದರೂ ನಾವಿಬ್ಬರೂ ನಮ್ಮ ನಮ್ಮ ಬದುಕಿನ ಒಂದು ಘಟ್ಟದಲ್ಲಿ ನಮ್ಮ ನಮ್ಮ ದೇಹ, ಆಯ್ಕೆಗಳು ಮತ್ತು ಸಾಮಾಜಿಕ ಸ್ಥಾನಗಳ ಮೇಲಿನ ನಿರ್ಧಾರಗಳನ್ನು ಮಾಡುವ ಅಧಿಕಾರವನ್ನು ಬೇರೆಯವರಿಗೆ ನೀಡಿಬಿಟ್ಟಿದ್ದೆವು. ನಾನು ಪುರುಷಪ್ರಧಾನವಾದ ರಕ್ಷಣೆಯ ಕೋಟೆಯಲ್ಲಿದ್ದೆ, ಅವಳು ಹಿಂಸೆಯ ಇಟ್ಟಿಗೆಗಳ ಕಟ್ಟಡದ ಬಂಧನದಲ್ಲಿದ್ದಳು. ನನ್ನ ಮಗಳ ವಯಸ್ಸಿನವಳಾದ ಅವಳು ಆ ಬಂಧನವನ್ನು ಭೇದಿಸಿ ಹೊರಬಂದು ನವೀನ ಜಗತ್ತನ್ನು ಕಟ್ಟಿಕೊಳ್ಳುವ ಸಾಹಸ ತೋರಿದ್ದಳು. ನನಗೆ ಅವಳ ಬಗ್ಗೆ ಅನುಕಂಪ ಮತ್ತು ರಕ್ಷಣಾಭಾವ ಸೇರಿದ ಅಚ್ಚರಿಯಿತ್ತು.
ನನ್ನ ಕೆಲಸ ಅವಳ ಕಿವಿ ಮತ್ತು ನಾಲಗೆಯಾಗಿಬಿಡುವುದಾಗಿತ್ತು. ಅಷ್ಟೇ ಆದರೆ ಹೃದಯದ ನಂಟಿಲ್ಲದ ನಾಲಗೆ ಇರಲು ಸಾಧ್ಯವೇ?
ಮೊದಮೊದಲು ನಾನು ಹತ್ತಾರು ಗಂಟೆಗಳ ಅವಧಿಯ ಅವಳ ವೀಡಿಯೋಗಳನ್ನು ಭಾಷಾಂತರಿಸಿದೆ. ನಂತರ ನನ್ನನ್ನು ತತ್ಕಾಲದ ತರ್ಜುಮೆಗಾಗಿ ಅವಳನ್ನು ಭೇಟಿ ಮಾಡಲು ತಿಳಿಸಿದರು. ಚಿತ್ರ ನಿರ್ಮಾಪಕರು ಕೇಳುವ ಪ್ರಶ್ನೆಗಳನ್ನು ಅವಳಿಗೆ ಕೇಳಿ ಅವಳ ಉತ್ತರಗಳನ್ನು ನಾನು ತರ್ಜುಮೆ ಮಾಡಿ ಚಿತ್ರ ನಿರ್ಮಾಪಕರಿಗೆ ತಿಳಿಸಬೇಕಿತ್ತು. ಚಿತ್ರ ನಿರ್ಮಾಪಕರೊಂದಿಗೆ ನನಗಿರಬೇಕಾದ ನಿಯತ್ತು ನನಗೆ ಈ ಹುಡುಗಿಯೊಂದಿಗಿರಬೇಕಾದ ನಿಯತ್ತಿನೊಂದಿಗೆ ಘರ್ಷಣೆ ನಡೆಸುತ್ತಿತ್ತು. ಈ ಮುಗ್ಧ ಹುಡುಗಿ ನನ್ನ ಸಹಪ್ರಜೆಯಾಗಿದ್ದಳು, ಅಷ್ಟಲ್ಲದೆ ನನ್ನ ಭಾಷೆ ಮಾತನಾಡುವ ಒಬ್ಬ ಹೆಣ್ಣು. ನಾನು ಅವಳ ನಂಬಿಕೆಯನ್ನು ಗಳಿಸಿಕೊಳ್ಳಬೇಕಾಗಿತ್ತು. ಹಾಗೆಯೇ ಅವಳಿಗೆ ಮೋಸವಾಗದ ಹಾಗೆಯೂ ನೋಡಿಕೊಳ್ಳಬೇಕಿತ್ತು.
ಅವಳನ್ನು ಭೇಟಿ ಮಾಡುವ ಮೊದಲು ನನ್ನಲ್ಲಿ ಕೊಂಚ ತಳಮಳವಿತ್ತು. ಒಂದು ಪ್ರಶ್ನೆ ನನ್ನನ್ನು ಕಾಡುತ್ತಿತ್ತು.
ಈ ಹುಡುಗಿ ತನ್ನ ಬದುಕಿನ ಕತೆಯನ್ನು ಈ ನಿರ್ಮಾಪಕರಿಗೆ ಏಕೆ ನೀಡಿದ್ದಾಳೆ? ನಿಜ, ಚಿತ್ರನಿರ್ಮಾಪಕರು ನಮ್ಮ ದೇಶದಲ್ಲಿ ಚಿತ್ರ ನಿರ್ಮಿಸಲು ಏನೇನು ನ್ಯಾಯಬದ್ಧವಾದ ಕ್ರಮಗಳನ್ನು ಕೈಗೊಳ್ಳಬೇಕೋ ಅದೆಲ್ಲವನ್ನೂ ತಪ್ಪಿಲ್ಲದೇ ತೆಗೆದುಕೊಂಡಿದ್ದರು. ಆದರೂ ನನಗೆ ಒಂದು ಸಂದೇಹವಿತ್ತು. ಈ ಹುಡುಗಿ ಕ್ಯಾಮರಾದ ಮುಂದೆ ತನ್ನ ಬದುಕಿನ ಗುಟ್ಟನ್ನೆಲ್ಲಾ ಹೇಳಿದಾಗ ಮತ್ತು ಅದನ್ನು ವಿವಿಧ ಸ್ಥಳಗಳಲ್ಲಿ ಚಿತ್ರಪ್ರದರ್ಶನದಲ್ಲಿ ಜನರು ನೋಡುವಾಗ, ಅದರ ಪರಿಣಾಮ ಏನಾಗಬಹುದೆಂದು ಈ ಹುಡುಗಿಗೆ ಅರ್ಥವಾಗಿದೆಯೇ? ಅವಳ ಮೇಲೆ ಅದರ ಭಾವನಾತ್ಮಕ ಪರಿಣಾಮಗಳು ಮುಂದೆ ಏನಾಗಬಹುದೆಂದು ಯೋಚಿಸುವುದು ಮತ್ತು ಅದನ್ನು ಅವಳಿಗೆ ತಿಳಿಸುವುದು ನನ್ನ ನೈತಿಕ ಜವಾಬುದಾರಿಯೇ? ತಯಾರಾದ ಚಿತ್ರ ಹೇಗಿರುತ್ತದೆಯೋ? ಏನಾದರೂ ತಪ್ಪಾದರೆ? ಈ ಹುಡುಗಿಯ ಜೀವನದ ಹಿಂಸೆಯ ಭಾಗಗಳನ್ನು ನಿರ್ಮಾಪಕರು ಹೇಗೆ ಚಿತ್ರಿಸುವರೋ? ಜನರಿಗೆ ಕಚಗುಳಿಯಿಡುವಂತೆ ಚಿತ್ರಿಸಿ ಹಣ ಮಾಡಲು ಉಪಯೋಗಿಸಿಕೊಂಡುಬಿಟ್ಟರೆ? ಅದಕ್ಕೆ ನಾನು ಸಹಾಯ ಮಾಡುತ್ತಿದ್ದೇನೆಯೇ? ಮತ್ತೊಂದು ವಿಧದಲ್ಲಿ ಯೋಚಿಸಿದರೆ ಈ ಚಿತ್ರದಿಂದ ಆ ಹುಡುಗಿಗೆ ಅನುಕೂಲಗಳಾದರೂ ಆಗಬಹುದು. ನಮ್ಮ ದೇಶದಲ್ಲಿ ಎಷ್ಟೊಂದು ಹುಡುಗಿಯರು ಸಂಕಟ ಅನುಭವಿಸುತ್ತಾರೆ. ಯಾರು ಬಂದು ಅವರೆಲ್ಲರ ಕತೆಯನ್ನು ಜಗತ್ತಿಗೆ ಹೇಳಲು ತಯಾರಿರುತ್ತಾರೆ?
ಅವಳು ನನಗೆ ಬೇಗ ಹೊಂದಿಕೊಂಡುಬಿಟ್ಟಳು. ತನ್ನ ಜೀವನದ ಕತೆಯನ್ನೆಲ್ಲಾ ಸವಿಸ್ತಾರವಾಗಿ ಹೇಳಿಬಿಟ್ಟಳು. ಕೆಲವು ಬಾರಿ ಭಾಷಾಂತರ ಮಾಡಲು ನಾನು ಹಿಂದೇಟು ಹಾಕುತ್ತಿದ್ದೆ. ನಿರ್ಮಾಪಕರು ಸರಿಯಾದ ಉತ್ತರಗಳಿಗಾಗಿ ನನ್ನನ್ನು ನಂಬಿಕೊಂಡಿದ್ದರು. ನಾನು ನನ್ನ ಕರ್ತ್ಯವ್ಯಕ್ಕೆ ಲೋಪ ಬರದಂತೆ ನಿರ್ಮಾಪಕರ ಪ್ರಶ್ನೆಗಳನ್ನು ಕನ್ನಡದಲ್ಲಿ ಅವಳಿಗೆ ಕೇಳುತ್ತಿದ್ದೆನಾದರೂ ಕೆಲವೊಮ್ಮೆ ಒಳೊಳಗೇ "ಬೇಡ, ಉತ್ತರಿಸಬೇಡ.... ನೀನು ಉತ್ತರಿಸಲೇಬೇಕೆಂಬ ಕಡ್ಡಾಯವೇನೂ ಇಲ್ಲ" ಎಂದು ಉಸುರಿಕೊಳ್ಳುತ್ತಿದ್ದೆ. ಹೇಳುತ್ತಾ ಹೇಳುತ್ತಾ ಅವಳು ಕಣ್ಣಿರಿಡುತ್ತಿದ್ದಳು; ನಾನು ಕ್ಯಾಮೆರಾ ಚಾಲನೆಯನ್ನು ನಿಲ್ಲಿಸಿಬಿಡಲು ಸೂಚಿಸಿ ಹೋಗಿ ಅವಳನ್ನು ಅಪ್ಪಿ ಹಿಡಿಯುತ್ತಿದ್ದೆ.
ಸಧ್ಯ ನಾನು ಹೆದರಿದ್ದಂತೇನೂ ಆಗಲಿಲ್ಲ. ನಿರ್ಮಾಪಕರು ಒಂದು ಅತ್ಯಂತ ಸೂಕ್ಷ್ಮ ಭಾವನೆಗಳ ಚಿತ್ರ ಮಾಡಿದರು. ಅಲ್ಲದೆ ಆ ಹುಡುಗಿಗೆ ನಿರ್ಮಾಪಕರು ಒಬ್ಬ ಮಾರ್ಗದರ್ಶಿಯಂತೆ, ಸ್ನೇಹಿತೆಯಂತೆ ಜೊತೆಯಾದರು. ಆದರೆ ಇದು ತಿಳಿಯಲು ನಾನು ಹತ್ತು ವರ್ಷ ಕಾಯಬೇಕಿತ್ತು.
ಆ ಹುಡುಗಿಯೊಂದಿಗೆ ವಿದೇಶಗಳಲ್ಲಿ ಚಿತ್ರಪ್ರದರ್ಶನಕ್ಕೆಂದು ಹೋದಾಗ ನನಗೆ ಅವಳ ಕಣ್ಣಿನಲ್ಲಿ ಹೊರದೇಶವನ್ನೂ ಅವುಗಳ ಜನರನ್ನೂ ಕಾಣುವ ಯೋಗ ಲಭಿಸಿತು.ಅವಳಿಗೆ ಎಲ್ಲವೂ ನವನವೀನ. ಆ ದೇಶದ ಹೆಂಗಸರನ್ನು ತೋರಿಸಿ "ನೋಡಿ ಮೇಡಮ್ ನೋಡಿ, ಹೇಗೆ ಕೂತ್ಕೋತಾರೆ" ಎನ್ನುತ್ತಿದ್ದಳು. ಮುಂದುವರೆದ ಸಮೃದ್ಧ ರಾಷ್ಟ್ರಗಳಲ್ಲಿ ಸ್ವತಂತ್ರವಾಗಿ ಜೀವಿಸುವ ಮಹಿಳೆಯರು ಅವಳ ಕಣ್ಣಿಗೆ ಸೋಜಿಗವಾಗಿ ತೋರುತ್ತಿದ್ದರು. "ಆದ್ರೂ ಸತ್ರೆ ಮಾತ್ರ ನಮ್ಮ ದೇಶದಲ್ಲೇ ಸಾಯಬೇಕು ಮೇಡಮ್" ಎನ್ನುತ್ತಿದ್ದಳು. ಯಾಕಂದರೆ ಆ ದೇಶದಲ್ಲಿ ಯಾರ ಮನೆಯಲ್ಲೂ ಅವಳಿಗೆ ತೀರಿಕೊಂಡ ಹಿರಿಯರ ಚಿತ್ರಪಟಗಳೂ, ಅದಕ್ಕೆ ಹಾಕಿರಬಹುದಾದ ಹಾರ ಮುಂದಿಟ್ಟಿರಬಹುದಾದ ಊದಿನ ಕಡ್ಡಿಗಳೂ ಕಾಣಲಿಲ್ಲ.
ಅಲ್ಲಿ, ಪ್ರಶ್ನೋತ್ತರದ ಸಮಯದಲ್ಲಿ, ನಾನು ಒಂದು ಅದೃಶ್ಯವಾದ ಕೇಬಲ್‍ನಂತೆ ಅವಳನ್ನೂ ವೀಕ್ಷಕರನ್ನೂ ಬೆಸೆದಿರುವಂತೆ ನನಗೆ ಭಾಸವಾಗುತ್ತಿತ್ತು. ನನ್ನ ಮೂಲಕ ಅವರು ತಮ್ಮತಮ್ಮ ಬದುಕಿನ ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದರು. ಮುಂದುವರೆದ ರಾಷ್ಟ್ರಗಳಲ್ಲಿ ಬಾಲ್ಯವಿವಾಹಗಳಿಲ್ಲ, ನಿಜ ಆದರೆ ಸಂಕಟಗಳು ಎಲ್ಲೆಲ್ಲೂ ಒಂದೇ. ಅಲ್ಲಿನ ಜನರು ಅವಳ ಕತೆಯೊಂದಿಗೆ ತಮ್ಮ ದುಃಖಗಳಿಗೂ ಸಮಾಧಾನ ಕಂಡುಕೊಳ್ಳುತ್ತಿದ್ದರು. ಭಾಷೆಯ ಕೇಬಲ್ ಆಗಿ ನಾನು ಅವರೆಲ್ಲರನ್ನೂ ಜೊತೆಗೂಡಿಸುತ್ತಿದ್ದೆ.
ನಾವು ಈ ಚಿತ್ರವನ್ನು ನಮ್ಮ ದೇಶದ ಹಳ್ಳಿಗಳ ಅನಕ್ಷರಸ್ಥ ಮಹಿಳೆಯರು ಮತ್ತು ಹುಡುಗಿಯರಿಗೂ ತೋರಿಸಿದೆವು. ಆಗ ಅವಳು ಅವರೆಲ್ಲರ ಪ್ರಿಯ ಅಕ್ಕನಾಗಿ ಕರೆಯಲ್ಪಡುತ್ತಿದ್ದಳು. ಅವರಿಗೆ ಅವಳ ದಾರುಣ್ಯದ ಕತೆಗಿಂತ ಅವಳ ಡ್ರೈವಿಂಗ್ ಕಲಿತ ಸಾಹಸದ ಕತೆಯ ಮೇಲೆ ಆಸಕ್ತಿಯಿರುತ್ತಿತ್ತು. ನಾನು ಮತ್ತೆ ಕೇಬಲ್ ಆಗಿ ಆ ಮಹಿಳೆಯರ ಆಸೆ ಕುತೂಹಲಗಳನ್ನು ಅವಳಿಗೆ ತಲುಪಿಸಿ, ಅವಳಿಂದ ಪ್ರೋತ್ಸಾಹ, ಆಶಾಕಿರಣಗಳನ್ನು ಅವರೆಡೆಗೆ ಒಯ್ಯುತ್ತಿದ್ದೆ.
ನಾನು ಮೊದಲಿಗೆ ಭಾಷಾಂತರ ಮಾಡುತ್ತಾ ಇಬ್ಬರ ಕಿವಿ, ನಾಲಗೆ ಮತ್ತು ಬುದ್ಧಿಯಾಗಿದ್ದೆ. ಈಗ ನಾನು ಒಂದು ಅದೃಶ್ಯ ಕೇಬಲ್ ಆಗಿಬಿಟ್ಟಿದ್ದೆ. ನಾನೇಕೆ ಹೀಗೆ ಹೇಳುತ್ತಿದ್ದೇನೆ? ಏಕೆಂದರೆ ಚಿತ್ರ ತಯಾರಿಕೆಯ ಹತ್ತು ವರ್ಷಗಳಲ್ಲಿ ನಾವು ಮೂವರೂ ಬದಲಾಗಿಹೋಗಿದ್ದಿವಿ. ಸಂವಹನ, ಬರಿಯ ಪದಗಳಿಗಿಂತ ಬಹಳ ಹೆಚ್ಚು ಬಗೆಗಳಲ್ಲಿ ನಡೆಯುತ್ತದೆ. ಅವರಿಬ್ಬರೂ ತಮ್ಮ ತಮ್ಮ ದೇಹದ ಚಲನೆ, ಮುಗುಳ್ನಗು, ಹುಬ್ಬುಗಂಟು, ಕಣ್ಣೋಟ ಮತ್ತು ಭುಜ ಹಾರಿಸುವಿಕೆಗಳನ್ನು ಅರ್ಥಮಾಡಿಕೊಳ್ಳಲಾರಂಭಿಸಿದ್ದರು. ನಾನು ಎಷ್ಟೊಂದು ಸಾಂಸ್ಕೃತಿಕ ಸೂಕ್ಷ್ಮಗಳನ್ನು ಒಬ್ಬೊರಿಂದೊಬ್ಬರಿಗೆ ದಾಟಿಸಿ ಬಿಟ್ಟಿದ್ದೇ ಎಂದರೆ ಅವರ ನಡುವೆ ಈಗ ಒಂದು ಆತ್ಮೀಯ ಸ್ನೇಹಸೇತು ಭದ್ರವಾಗಿ ನಿಂತುಬಿಟ್ಟಿತ್ತು.ಅವರಿಬ್ಬರನ್ನೂ ನೋಡುತ್ತಿದ್ದರೆ ನನಗೆ ಭಾಷಾಂತರಕಾರಳಾಗಿ ಬಂದು, ಅವರಿಬ್ಬರನ್ನೂ ಬೆಸೆದ ನನ್ನ ಬೆಳವಣಿಗೆಯ ಬಗ್ಗೆ ನನಗೇ ಆಶ್ಚರ್ಯವಾಗುತ್ತಿತ್ತು. ಮತ್ತೊಂದು ಕೆಲಸ ಎದುರಾದಾಗ ನಾನು ಮತ್ತೆ ಮತ್ತಿನ್ನಿಬ್ಬರ ಕಿವಿ, ನಾಲಗೆ ಮತ್ತು ಬುದ್ಧಿಯಾಗುವುದರಿಂದ ಪ್ರಾರಂಭಿಸಿ ಭಾಷೆಯ ಅಡಚಣೆಯನ್ನು ಮೀರಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ತವಕಿಸುವವರನ್ನು ಒಂದಾಗಿ ಸೇರಿಸಬೇಕಾಗುತ್ತದೆ.
ನಾವು ಎಲ್ಲಿ ಹುಟ್ಟುತ್ತೇವೆ ಎಂಬುದು ಒಂದು ಆಕಸ್ಮಿಕ...ಆದರೆ ಅದರಿಂದಾಗಿ ನಮ್ಮನಮ್ಮಲ್ಲಿ ಎಷ್ಟೊಂದು ವ್ಯತ್ಯಾಸಗಳಾಗುತ್ತವೆ !
ಸೂರ್ಯಕಿರಣಗಳು ತಗುಲಿ ಕಣಿಗಿಲೆಗಳ ಮೇಲಿನ ಇಬ್ಬನಿಯ ಬಿಂದುಗಳು ಇದೀಗ ಹೊಳೆಯಲಾರಂಭಿಸಿದ್ದವು. ಅಲ್ಲಿಂದ ಏಳುವ ಮೊದಲು ನಾನು ನನ್ನ ಚಹಾದತ್ತ ನೋಡಿದೆ. ನಮ್ಮ ದೇಶದ ಅಮೃತ ಪಾನೀಯವಿದು, ಚೇತನ ನೀಡುವ ಮಸಾಲೆಯುಕ್ತ ಕಡೆಯ ಸಿಹಿ ಗುಟುಕನ್ನು ಕುಡಿದು, ನಾನು ಅಲ್ಲಿಂದ ಎದ್ದೆ.