ನನ್ನದೇ ಒಂದು ರಾಮಾಯಣ

Read in English.

ನಾನು ಪಶ್ಚಿಮ ಘಟ್ಟಗಳ ಭಾಗವಾದ ಬಂಟಮಲೆಯ ಕಾಡೊಳಗೆ ಹುಟ್ಟಿ ಬೆಳೆದವನು. ರಾತ್ರಿಯಾಗುತ್ತಲೇ ಕಾಡಿನ ಭಯಾನಕತೆಯನ್ನು ಮರೆಸಲು ಅಮ್ಮ ಕತೆ ಹೇಳುತ್ತಿದ್ದರು. ಸುತ್ತ ಕತ್ತಲೆ. ಕಪ್ಪೆಗಳ ವಟವಟ ಸದ್ದು. ಭಯ ಬೀಳಿಸುವ ಆಳು ಪಕ್ಕಿಯ ಆರ್ತನಾದದಂತಿದ್ದ ಕೂಗು. ಹೆಚ್ಚೇನೂ ಬೆಳಕು ಚೆಲ್ಲದೆ ಸಣ್ಣಗೆ ಉರಿಯುತ್ತಿದ್ದ ಚಿಮಿಣಿದೀಪ. ಅಲ್ಲಿ ಕತೆ ಹುಟ್ಟಿಕೊಳ್ಳುತ್ತಿತ್ತು.

‘ ಒಂದೂರಲ್ಲಿ ಒಬ್ಬ ತಪಸ್ಸು ಮಾಡುತ್ತಿದ್ದನಂತೆ. ಅವನ ಹೆಸರು ಜನಕ ಮುನಿ. ನಮ್ಮ ಮನೆಯ ಹಾಗಿರುವ ಅವನ ಸಣ್ಣ ಗುಡಿಸಲಿನ ಎದುರಿಗೆ ಒಂದು ದೊಡ್ಡ ಮರವಿತ್ತು. ಆ ಮರದಲ್ಲಿ ದಿನಾ ಒಂದು ಕಪ್ಪು ಕಾಗೆ ಕುಳಿಕೊಂಡು ಕಾಕಾ ಎಂದು ಕೂಗುತ್ತಿತ್ತು. ಅದರಿಂದ ಋಷಿಗೆ ತೊಂದರೆಯಾಗುತ್ತಿತ್ತು. ಅವ ಕೈಯೆತ್ತಿ ಓಡಿಸಿದರೆ, ಅದು ಮತ್ತೆ ಬಂದು ಮರದಲ್ಲಿ ಕುಳಿತು ಕೂಗುತ್ತಿತ್ತು. ಒಂದು ದಿನ ಜನಕ ಹೇಳಿದ- ‘ಯಾರು ಕಾಗೆಯನ್ನು ಕೊಲ್ಲುವರೋ ಅವರಿಗೆ ನನ್ನ ಮುದ್ದು ಮಗಳಾದ ಸಿರಿ ಸೀತಾಮು ದೇವಿಯನ್ನು ಮದುವೆ ಮಾಡಿಕೊಡುತ್ತೇನೆ’ ಅಂತ. ಬಹಳ ದಿನದವರೆಗೆ ಕಾಗೆ ಕೊಲ್ಲಲು ಯಾರೂ ಬರಲಿಲ್ಲ. ಒಂದು ದಿನ ರಾಮ ಮತ್ತು ಲಕ್ಷ್ಮಣ ದೇವರು ಬೇಟೆಗೆ ಹೊರಟವರು ಕಾಡಿನಲ್ಲಿದ್ದರು. ಜನಕ ಮುನಿ ಹೇಳಿದ್ದನ್ನು ಕೇಳಿಸಿಕೊಂಡರು. ಲಕ್ಷö್ಮಣ ದೇವರು ಬಹಳ ಬೇಗ ಮುಂದೆ ಹೋದರು, ರಾಮದೇವರು ಹಿಂದೆ ಉಳಿದರು. ಲಕ್ಷö್ಮಣ ದೇವರು ಮರ ನೋಡಿ ಕಾಗೆಗೆ ಗುರಿಯಿಟ್ಟು ಹೊಡೆದರು. ಕಾಗೆ ನೆಲಕ್ಕೆ ಬಿತ್ತು. ‘ತಗೋ ಸೀತೆಯ’ ಅಂದರು ಜನಕ ಮುನಿಗಳು. ಆದರೆ ಲಕ್ಷö್ಮಣ ದೇವರು ತೆಗೆದುಕೊಳ್ಳದೆ ತಲೆ ಕೆಳಗೆ ಹಾಕಿದರು. ‘ಸಿರಿ ಸೀತಾಮು ದೇವಿ ನನಗಲ್ಲ, ಅಣ್ಣ ರಾಮ ದೇವರಿಗೆ’ ಎಂದರು ಮೆಲ್ಲಗೆ. ಜನಕ ಮುನಿ ಒಪ್ಪಲಿಲ್ಲ. ಇಬ್ಬರೂ ಜೋರು ಜಗಳಾಡಿದರು. ಕೊನೆಗೆ ಲಕ್ಷö್ಮಣ ದೇವರು ಕೈಚಾಚಿ ಬೊಗಸೆಯಲ್ಲಿ ಸೀತಾಮು ದೇವಿಯನ್ನು ಪಡೆದರು. ಅಣ್ಣ ರಾಮನಿಗೆ ಕೊಡಲೆಂದು ಹಿಂದೆ ನಡೆದರು. ಹಾದಿಯಲ್ಲಿ ಸೀತಾಮು ದೇವರು ಲಕ್ಷö್ಮಣನಿಗೆ ಹೇಳಿದರು-

‘ನನಗೂ ದಾರಿ ದೂರವಾಗಿದೆ, ಕಾಲು ಬಚ್ಚಿದೆ, ಆರಾಮ ಮಾಡಬೇಕು.’.

ಲಕ್ಷö್ಮಣ ದೇವರು ಒಪ್ಪಿದರು. ಹಾಸುಬಂಡೆ ಹುಡುಕಿದರು, ಚಿಗುರೆಲೆ ತಂದರು, ಚೆಂದವಾಗಿ ಎಲೆ ಹರಡಿದರು. ಸೀತಾಮು ದೇವರು ಅದರ ಮೇಲೆ ಮೊದಲು ಕುಳಿತರು, ಮತ್ತೆ ಹಾಗೇ ಚಿಗುರೆಲೆ ಮೇಲೆ ಮಲಗಿದರು.

ಗಾಳಿ ಜೋರಾಗಿ ಬೀಸಿತು. ಸೀತಾಮು ದೇವಿಯ ಎದೆಯ ಮೇಲಿನ ಸೆರಗು ಗಾಳಿಗೆ ಹಾರಿತು. ಲಕ್ಷö್ಮಣ ದೇವರು ಕಸಿವಿಸಿಗೊಂಡರು. ಕೈಯಲ್ಲಿ ಸೀರೆಯನ್ನು ಎದೆಯ ಮೇಲೆ ಎಳೆಯದಾದರು. ಕೊನೆಗೆ ಮಂಡಿಯೂರಿ ಕುಳಿತು ತುಟಿಯಿಂದ ಸೀರೆ ಸರಿಪಡಿಸಿದರು. ಸೀತಾಮು ದೇವರ ಇದಿರು ಲಕ್ಷö್ಮಣ ದೇವರು ಮಕ್ಕಳಾದರು. ಮತ್ತೆ ಇಬ್ಬರೂ ರಾಮ ದೇವರ ಭೇಟಿ ಮಾಡಿದರು. ಹಾದಿಯಲಿ ಸೆರಗು ಹಾರಿದ ಕತೆಯನ್ನು ರಾಮನಿಗೆ ಹೇಳಲೇ ಬೇಡವೇ ಎಂದು ಲಕ್ಷö್ಮಣ ದೇವರು ಚಿಂತೆ ಮಾಡಿದರು. ಕೊನೆಗೆ ಹೇಳಿದರು. ‘ಚಿಂತೆ ಬೇಡ, ನೀನು ಹಾಗೆ ಮಾಡುವಾಗ ನಾನು ಹಕ್ಕಿಯಾಗಿ ಮರದ ಮೇಲೆ ಕುಳಿತು ನೋಡುತ್ತಿದ್ದೆ’ ಎಂದರು ರಾಮ ದೇವರು. ಹೀಗೆ ಕತೆ ಮುಂದುವರಿಯುತ್ತಿದ್ದಾಗ ಯಾವುದೋ ಘಟ್ಟದಲ್ಲಿ ನಾನು ನಿದ್ದೆಗೆ ಜಾರುತ್ತಿದ್ದೆ. ಮರುದಿನ ಅಮ್ಮನೊಂದಿಗೆ ಬಂಟಮಲೆಯ ಕಾಡಿನೊಳಗೆ ಬಿದಿರಕ್ಕಿ ಆಯಲು ಹೋದಾಗ ಕಂಡ ಹಕ್ಕಿಗಳು, ಮರಗಳು, ಚಿಗುರೆಲೆ, ಹಾಸು ಬಂಡೆಗಳು ರಾತ್ರಿಯ ರಾಮನ ಕತೆಯನ್ನು ನೆನಪಿಗೆ ತಂದು ಕಾಡೆಲ್ಲ ರಾಮಾಯಣವಾಗುತ್ತಿತ್ತು.

ಇದಾದ ಎಷ್ಟೋ ವರ್ಷಗಳ ಆನಂತರ ಸುಳ್ಯ ಸಮೀಪದ ಪೂಮಲೆ ಬೆಟ್ಟದ ಬುಡದಲ್ಲಿ ಹರಿಯುತ್ತಿರುವ ಪುಟ್ಟ ತೊರೆಯ ದಂಡೆಯಲ್ಲಿ ವಾಸಿಸುತ್ತಿದ್ದ ಅಜ್ಜಯ್ಯ ಒಬ್ಬರನ್ನು ಭೇಟಿಯಾಗಿದ್ದೆ.

‘ಅಜ್ಜಾ, ಒಂದು ಕತೆ ಹೇಳಿ’ ಅಂದೆ.

‘ಹಾಗೆಲ್ಲ ಕತೆ ಹೇಳುವುದುಂಟೇ? ಈಗ ಊಟಮಾಡಿ ಮಲಗಿ, ಮುಂಜಾನೆ ಕೋಳಿ ಕೂಗುವ ಹೊತ್ತಿಗೆ ತಯಾರಾಗಿ, ಕತೆ ಹೇಳುತ್ತೇನೆ’ ಅಂದರು.

ಸರಿ. ಹಾಗೇ ಮಾಡಿದೆ. ಬೆಳಗ್ಗೆದ್ದು ನೋಡುವಾಗ ಅಜ್ಜಯ್ಯ ಆಗಲೇ ಸ್ನಾನಮಾಡಿ, ಹಣೆಗೆ ಭಸ್ಮ ಬಳಿದು, ಬಿಳಿಬಟ್ಟೆ ಉಟ್ಟುಕೊಂಡು ಕತೆ ಹೇಳಲು ತಯಾರಾಗಿ ಕುಳಿತಿದ್ದರು.

ಕತೆ ಹೇಳಲು ಸಮಯ, ಸಂದರ್ಭ ಬೇಕೇ ಎಂದು ಯೋಚಿಸಿ ನಾನು ಅವಕ್ಕಾಗಿದ್ದೆ.

ಅವರು ಹೇಳಿದರು-

‘ಏನು ಹಾಗೆ ನೋಡುತ್ತೀರಿ, ಕತೆ ಹೇಳುತ್ತೇನೆ, ನೀವು ಬರ್ಕೊಳ್ಳಿ, ಬರ್ಕೊಳ್ಳಿ, ಮತ್ತೆ ಸರಿಯಾಗಿ ಬರ್ಕೊಳ್ಳಿ’

ನಾನು ಸಾವರಿಸಿಕೊಂಡು ಬರೆದುಕೊಳ್ಳಲು ತಯಾರಾದೆ. ಮೌಖಿಕ ಕಥನಗಳು ಅಕ್ಷರಕ್ಕೆ ದಾಟಿಕೊಳ್ಳುವ ಮುಂಜಾವದ ಕ್ಷಣಗಳವು.

ಅಜ್ಜ ಹೇಳತೊಡಗಿದರು-

‘ಓ ಅಲ್ಲಿ ಕಾಣುತ್ತಿದೆಯಲ್ಲ, ಪೂಮಲೆಬೆಟ್ಟ, ಅದರ ಹೆಸರು ಹೇಗೆ ಬಂದಿದೆ ನಿನಗೆ ಗೊತ್ತೋ?’

‘ಇಲ್ಲ’

‘ಹಾಗಾದರೆ ಬರ್ಕೊಳ್ಳಿ’

‘ಸರಿ, ನೀವು ಹೇಳಿ’

‘ಹಿಂದೆ ರಾಮ ದೇವರು, ಲಕ್ಷö್ಮಣ ಮತ್ತು ಸೀತಾ ದೇವಿಯರೊಂದಿಗೆ ವನವಾಸಕ್ಕೆ ಹೋದರು. ಅಲ್ಲಿ ಚಿನ್ನದ ಜಿಂಕೆ ಕಂಡು ಸೀತೆಗೆ ಮೋಹ ಬಂತು. ಅದು ಬೇಕು ಅಂತ ಹಠ ಹಿಡಿದಳು. ಜಿಂಕೆ ಹಿಡಿಯಲು ರಾಮ ದೇವರು ಹೋದರು. ಎಷ್ಟೊತ್ತಾದರೂ ರಾಮ ಬಾರದ್ದನ್ನು ಕಂಡು ಲಕ್ಷö್ಮಣ ದೇವರೂ ರಾಮನನ್ನು ಹುಡುಕಿಕೊಂಡು ದೂರ ಹೋದರು. ಆಗ ರಾವಣ ಮುನಿ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಿಕೊಂಡು ವಿಮಾನದಲ್ಲಿ ಹೋದ.

ಈಗ ರಾವಣ ತನ್ನನ್ನು ಕದ್ದುಕೊಂಡು ಹೋದ ಎಂಬ ವಿಷಯವನ್ನು ರಾಮನಿಗೆ ತಿಳಿಸುವುದು ಹೇಗೆ?

ಕೊನೆಗೆ ಸೀತಮ್ಮ ಒಂದು ಉಪಾಯ ಮಾಡಿದರು. ತನ್ನ ತಲೆಯಲ್ಲಿದ್ದ ಹೂಮಾಲೆಯನ್ನು ತೆಗೆದು ವಿಮಾನದಿಂದ ಕೆಳಕ್ಕೆ ಎಸೆದಳು.

ಹಾಗೆ ಹೂಮಾಲೆ ಬಿದ್ದ ಜಾಗವೇ ಈ ಪೂಮಲೆ ಬೆಟ್ಟ’

‘ಸರಿಯಾಗಿ ಬರ್ಕೊಂಡ್ರಾ ಇಲ್ವಾ?

‘ಬರ್ಕೊಂಡೆ’

ಬೆಳಕೇರುವವರೆಗೂ ಅಜ್ಜನ ಕತೆ ಸಾಗಿತ್ತು. ಕಾಡಿನಲ್ಲಿ ಸೀತೆ ಮಲ್ಲಿಗೆ ಹೂ ಬೆಳೆಸಿದ್ದು, ಬಂಡೆ ಮೇಲೆ ಕುಳಿತು ಋಷಿ ಪತ್ನಿಯರಿಗೆ ಕತೆ ಹೇಳಿದ್ದು, ಹಾಸುಗಲ್ಲಿನ ಮೇಲೆ ರಾಮ ತನ್ನ ಪಾದದ ರೇಖೆ ಮೂಡಿಸಿದ್ದು... ಯಾವುದೋ ಪುಟ್ಟ ಹಕ್ಕಿಗೆ ಸೀತೆ ತನ್ನ ಹೆಸರನ್ನೇ ಇಟ್ಟದ್ದು.. ಹೀಗೆ ಅದು ಬೆಳೆಯುತ್ತಲೇ ಇತ್ತು.

ಮುಂದೆ ನಾನು ಪೂಮಲೆ ಸುತ್ತಿದಾಗಲೆಲ್ಲ ನನಗೆ ಕಂಡದ್ದು ಸೀತೆ ಎಸೆದ ಮಲ್ಲಿಗೆ ಹೂವಿನ ಎಸಳುಗಳು. ಕೇಳಿದ್ದೆಲ್ಲ ಸೀತೆ ಹಕ್ಕಿಯ ಹಾಡುಗಳು.

ಈ ಬಗೆಯ ಕಥನಗಳು ಕಾಲ ಸಾಗಿದಂತೆಲ್ಲ ಬದಲಾಗುತ್ತಲೇ ಹೋಗುವುದನ್ನು ಗಮನಿಸುತ್ತಿದ್ದೆ.

೧೯೯೦ರ ದಶಕದಲ್ಲಿ ನಾನು ಮಂಗಳೂರಿನ ಸಮೀಪದ ಉಚ್ಚಿಲದ ಕಡಲ ಕಿನಾರೆಯಲ್ಲಿ ವಾಸಿಸುತ್ತಿದ್ದೆ. ಒಂದು ದಿನ ಸಾಯಂಕಾಲ ಖಾವಿ ಶಾಲು ಹಾಕಿಕೊಂಡ ಹುಡುಗರ ಗುಂಪೊAದು ಮನೆಗೆ ಬಂತು.

ಒಬ್ಬ ಹೇಳಿದ-

‘ನಾವು ಅಯೋಧ್ಯೆಯಲ್ಲಿ ರಾಮನಿಗೆ ದೇವಸ್ಥಾನ ಕಟ್ಟಬೇಕಾಗಿದೆ. ಅದಕ್ಕಾಗಿ ಈ ಇಟ್ಟಿಗೆಯನ್ನು ಅಲ್ಲಿಗೆ ಕಳಿಸಬೇಕು. ಪ್ರಸಾದ ತಗೊಳ್ಳಿ, ಹಣ ಕೊಡಿ’

‘ಯಾವ ರಾಮನಿಗೆ ನೀವು ಅಲ್ಲಿ ದೇವಸ್ಥಾನ ಕಟ್ಟುತ್ತೀರಿ?

‘ಏನು ಹಾಗಂದರೆ? ನೀವು ಹಿಂದೂ ಅಲ್ಲವೇ? ಬಾಬ್ರಿ ಮಸೀದಿ ನಮ್ಮ ಜಾಗ.

ಅವರಲ್ಲೊಬ್ಬ ಸಣ್ಣ ಭಾವಚಿತ್ರವೊಂದನ್ನು ತೆಗೆದು ನನ್ನ ಮುಂದೆ ಹಿಡಿದ.

ನಾನು ದಿಟ್ಟಿಸಿ ನೋಡಿದೆ.

ಅದು ಉಗ್ರ ಸ್ವರೂಪೀ ರಾಮನ ಚಿತ್ರವಾಗಿತ್ತು, ಕೈಯಲ್ಲಿ ಹೆದೆಯೇರಿಸಿದ ಬಿಲ್ಲು, ಮುಖದಲ್ಲಿ ರೌದ್ರಭಾವ, ಬದಲಾದ ಬಣ್ಣ, ಯಾರನ್ನೋ ಕೊಲ್ಲುವ ತವಕ. ಎಲ್ಲರ ರಕ್ಷಕ ರಾಮ ಈಗ ಸರ್ವನಾಶಕ್ಕೆ ಸಿದ್ಧನಾಗಿರುವಂತೆ ತೋರಿತು. ಬಂಟಮಲೆಯ ಬುಡದಲ್ಲಿದ್ದ ನನ್ನ ಗುಡಿಸಲಿನ ಗೋಡೆಯಲ್ಲಿ ನೇತಾಡುತ್ತಿದ್ದ ಹರಕಲು ಕ್ಯಾಲಂಡರಿನ ಸೌಮ್ಯ ಸ್ವರೂಪೀ ರಾಮ ಬದಲಾಗಿದ್ದ. ಬಂದ ಜನರ ಹಾವಭಾವ, ಭಾಷೆ ನೋಡಿದಾಗ ಕಥನ ಬದಲಾಗಿದೆ ಅಂತನ್ನಿಸಿತು. ರಾಮಾಯಣದ ಅವರ ಹೊಸ ಕಥನದಲ್ಲಿ ಅಮ್ಮನಿರಲಿಲ್ಲ, ಅಜ್ಜನಿರಲಿಲ್ಲ, ಹಕ್ಕಿಗಳಿರಲಿಲ್ಲ, ಹೂವಿನ ಎಸಳುಗಳೂ ಇರಲಿಲ್ಲ.

ಇವನ್ನೆಲ್ಲ ಇವತ್ತು ಎಲ್ಲಿ? ಯಾರಿಗಾಗಿ ಬರೆಯಲಿ?

The author in 1982

ಕರ್ನಾಟಕದ ಸುಲಿಯಾದಲ್ಲಿ ಜನಿಸಿದ ಪುರುಷೋತ್ತಮ ಬಿಳಿಮಲೆ ಒಬ್ಬ ಜಾನಪದ ತಜ್ಞ ಮತ್ತು ಸಾಹಿತ್ಯ ವಿಮರ್ಶಕ. ಅವರು ಭಾರತೀಯ ಜಾನಪದ, ಆಧುನಿಕ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನಗಳನ್ನು ಕುರಿತು ಕನ್ನಡದಲ್ಲಿ ವ್ಯಾಪಕವಾಗಿ ಬರೆದಿದ್ದಾರೆ. ಅವರ ಪ್ರಮುಖ ಪ್ರಕಟಣೆಗಳೆಂದರೆ ಕರಾವಳಿ ಜಾನಪದ (1990), ಶಿಷ್ಟಾ ಪರಿಷ್ಟ (1992), ಕುಡು ಕಟ್ಟು (1998), ಬಹುರೂಪ (2015) ಮತ್ತು ಕನ್ನಡ ಕಥನಗಾಲು (2019). ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ (2008) ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು (2011) ಪಡೆದಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯ, ಕನ್ನಡ ವಿಶ್ವವಿದ್ಯಾಲಯ ಮತ್ತು ಜೆ ಎನ್ ಯುಗಳಲ್ಲಿ ಬೋಧಿಸಿದ್ದಾರೆ. ಅವರು ಭಾರತದ ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿ ನಿರ್ದೇಶಕರಾಗಿದ್ದರು.

೭ ಸೆಪ್ತೆಂಬರ್ ೨೦೨೧




Return to the Understory stories list